ಪುಲಿಗೆರೆ -
 	ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಿರುವ ಒಂದು ಪಟ್ಟಣ. ಈಗ ಇದನ್ನು ಲಕ್ಷ್ಮೇಶ್ವರ ಎಂದು ಕರೆಯಲಾಗುತ್ತಿದೆ. ಇದು ಗದಗ ಜಿಲ್ಲೆಯ ಪ್ರಮುಖ ಊರಾಗಿದೆ. ಧಾರವಾಡದಿಂದ ಆಗ್ನೇಯಕ್ಕೆ ಸುಮಾರು 72 ಕಿ.ಮೀಗಳ ಅಂತರದಲ್ಲಿದೆ. ಗುಡಗೇರಿ ರೈಲು ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿದೆ. ಮೊದಲಿಗೆ ಇದು ಪುಲಿಗೆರೆ ಮುನ್ನೂರು-ಪುಲಿಗೆರೆ-ಹುಲಿಗೆರೆ-ಪುರಿಗೆರೆ, ಪೊರಿಗೆರೆ-ಪುಲಿಕರ ನಗರ ಎಂದಿದ್ದು ಅನಂತರ ಲಕ್ಷ್ಮಣರಸ ಲಕ್ಷ್ಮೇಶ್ವರ ಗುಡಿಯ ಜೀರ್ಣೋದ್ಧಾರ ಮಾಡಿದಿದುದರ ನೆನಪಿಗಾಗಿ ಲಕ್ಷ್ಮಣೇಶ್ವರ, ಲಕ್ಷ್ಮೇಶ್ವರ ಆಯಿತು. 

	ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕೊಪಣ ನಗರ ಉಕ್ಕುಂದ ಕಿಸುವೊಳಲು ಪುಲಿಗೆರೆಗಳ ತಿರುಳ್‍ಗನ್ನಡದ ಗಡಿವೂರುಗಳು. ಪಂಪಭಾರತದಲ್ಲಿ, ಏಕಾಂತ ರಾಮಯ್ಯನ ರಗಳೆಯಲ್ಲಿ, ಸೋಮೇಶ್ವರ ಶತಕದಲ್ಲಿ, ಸುರಂಗ ಕವಿಯ ತ್ರಿಷಷ್ಟಿ ಪುರಾತನ ವಿಲಾಸದಲ್ಲಿ ಪುಲಿಗೆರೆಯ ಹೆಸರು ಬಂದಿದೆ. ವಚನಕಾರನಾದ ಆದಿಶೆಟ್ಟಿ ಇಲ್ಲಿ ಸೋಮೇಶ್ವರನನ್ನು ಸ್ಥಾಪಿಸಿದನೆಂದೂ (1100) ಹಲವಾರು ಶಾಸನಗಳಲ್ಲಿ ಹೇಳಿದೆ. 

	ಇದು ಒಂದು ಧರ್ಮಜಾಗೃತಿಯ ಊರಾಗಿದೆ. ಇಲ್ಲಿ ವೀರಶೈವ, ಜೈವ, ವೈಷ್ಣವ, ಮುಸಲ್ಮಾನ ಹೀಗೆ ಎಲ್ಲ ಮತಪಂಥದವರಿದ್ದಾರೆ. 11-12ನೆಯ ಶತಮಾನದಲ್ಲಿ ಚಾಳುಕ್ಯ ಮಾದರಿಯಲ್ಲಿ ಕಟ್ಟಿದ ಸ್ವಯಂಭೂ ಸೋಮೇಶ್ವರ ದೇವಾಲಯ ಈ ಊರಿನ ಕುಲದೇವತೆಯ ನೆಲೆಯಾಗಿದೆ. ಗುಡಿ ಭವ್ಯವಾಗಿದ್ದು ನೃತ್ಯ ಮಂಟಪ, ಸಭಾಮಂಟಪ, ಪೌಳಿ, ಘಟಿಕಾಸ್ಥಳ ಪೂರ್ವಕ್ಕಿರುವ ಮಹಾದ್ವಾರ ಹಾಗೂ ಅದರ ಮುಂದಿರುವ ಎಡಬಲಗಳಲ್ಲಿರುವ ಚಂದ್ರಶಾಲೆ ಎಲ್ಲವೂ ಅಪೂರ್ವವೆನಿಸಿವೆ. ಸುತ್ತಲೂ ಪಂಚಲಿಂಗಗಳ ಚಿಕ್ಕ ಗುಡಿಗಳಿದ್ದು, ಸೋಮೇಶ್ವರನ ಭವ್ಯತೆಯನ್ನು ಹೆಚ್ಚಿಸಿವೆ. 

	ಇಲ್ಲಿರುವ ಜೈನರ ಶಂಖಬಸದಿಯಲ್ಲಿಯ ಸಹಸ್ರಕೂಟ ಜಿನಿಬಿಂಬ ಅಪೂರ್ವ ಕಲಾಕೃತಿಯಾಗಿದೆ. ಈ ಬಸದಿ ಲಕ್ಷ್ಮೇಶ್ವರದ ಇತಿಹಾಸವನ್ನು 6-7ನೆಯ ಶತಮಾನಕ್ಕೆ ಒಯ್ಯುತ್ತದೆ. ಅಲ್ಲದೆ, ಇಲ್ಲಿ ಶಂಕರಾಚಾರ್ಯರ ಮಠ ಹಾಗೂ ರಾಘವೇಂದ್ರಸ್ವಾಮಿಗಳ ಮಠಗಳಿವೆ. ಇಲ್ಲಿರುವ ಜುಮ್ಮಾ ಮಸೀದಿ ಅತ್ಯಂತ ಶ್ರೇಷ್ಠ ಕಲಾ ಕೆತ್ತನೆಗಳಿಂದ ಕೂಡಿದೆ. ಇಲ್ಲಿ ಅನೇಕ ಪ್ರಾಚೀನ ಶಾಸನಗಳೂ ದೊರೆತಿವೆ. ಇಲ್ಲೊಂದು ಪ್ರಾಚೀನ ವಸ್ತು ಸಂಗ್ರಹಾಲಯವೂ ಇದೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ